ಅಮರಾಂತೇಸಿ
	ದಂಟು, ಅರಿವೆ, ಉತ್ತರಾಣಿ ಮುಂತಾದ ಸಸ್ಯಗಳನ್ನು ಒಳಗೊಂಡಿರುವ ಸಸ್ಯಕುಟುಂಬ, ಇದರಲ್ಲಿ 64 ಜಾತಿಗಳೂ ಸುಮಾರು 800 ಪ್ರಭೇದಗಳೂ ಇವೆ. ಹೆಚ್ಚಾಗಿ ಅಮೆರಿಕೆಯ ಉಷ್ಣವಲಯದ ಪ್ರದೇಶ, ಆಫ್ರಿಕ, ಭಾರತಗಳಲ್ಲಿ ಬೆಳೆಯುತ್ತವೆ. ಉಪಯುಕ್ತತೆ ದೃಷ್ಟಿಯಿಂದ ಅಷ್ಟು ಮುಖ್ಯವಲ್ಲವಾದರೂ ಕೆಲವು ಜಾತಿಯ ಗಿಡಗಳನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ; ಮತ್ತೆ ಕೆಲವು ಅಲಂಕಾರಸಸ್ಯಗಳು (ಗ್ರಾಂಫ್ರಿನ, ಅಮರಾಂತಸ್ ಪ್ರಭೇದಗಳು).

	ಅಮರಾಂತಸ್ ಪ್ರಭೇದದಲ್ಲಿ ಹಲವಾರು ಜಾತಿಗಳಿದ್ದು ಸುಮಾರು 25 ಭಾರತದಲ್ಲಿ ದೊರೆಯುತ್ತವೆ. ಅಮರಾಂತಸ್ ಕಾಡೇಟಸ್ ಮತ್ತು ಅಮರಾಂತಸ್ ಪ್ಯಾನಿಕ್ಯುಲೇಟಸ್. (ಕೀರೆಸೊಪ್ಪು), ಅಮರಾಂತಸ್ ಓಲರೇಸಿಯ (ಕಬ್ಬಿಣಾಂಶ ಹೆಚ್ಚಾಗಿರುವುದರಿಂದ)-ಇವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಈ ಪ್ರಭೇದದ ಎಲ್ಲ ಜಾತಿಯ ಗಿಡಗಳನ್ನೂ ದನಕರುಗಳು ತಿನ್ನುತ್ತವೆ.

	ಅಕೈರಾಂತಸ್ ಆಸ್ಪರದ (ಉತ್ತರಾಣಿಗಿಡ) ಹೂಗೊಂಚಲಿನಿಂದ ಮುಲಾಮನ್ನು ತಯಾರಿಸಿ ವಿಷಕ್ರಿಮಿ ಕಚ್ಚಿದ ಜಾಗದಲ್ಲಿ ಹಚ್ಚುತ್ತಾರೆ. ಗಿಡದ ಕಷಾಯವನ್ನು ಮೂತ್ರ ವಿಸರ್ಜನೆಯ ತೊಂದರೆಯುಳ್ಳವರಿಗೆ ಕೊಡುತ್ತಾರೆ, ಸಿಲೋಷಿಯ ಅರ್ಜೆಂಟೈನದ (ಅಣ್ಣೆಸೊಪ್ಪಿನ ಗಿಡ) ಬೀಜಗಳನ್ನು ಡಯೇರಿಯಾ ಹಾಗೂ ಕೆಲವು ರಕ್ತಸಂಬಂಧ ರೋಗಗಳಿಗೆ ಉಪಯೋಗಿಸುತ್ತಾರೆ.

(ಎಸ್.ಎ.)
(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ